ಬೇಸಿನ್ ಒಪ್ಪಂದ
ಎರಡನೆಯ ಪೇಷ್ವೆ ಬಾಜೀರಾಯ (1796-1818) ಮತ್ತು ಬ್ರಿಟಿಷರ ಮಧ್ಯೆ 1802 ಡಿಸೆಂಬರ್ 31ರಂದು ಆದ ಒಪ್ಪಂದ. ಇದಕ್ಕೆ ಅನುಗುಣವಾಗಿ ಈಸ್ಟ್ ಇಂಡಿಯ ಕಂಪನಿ ಸರ್ಕಾರ ಬಾಜೀರಾಯನನ್ನು ಪುಣೆಯ ಸಿಂಹಾಸನದ ಮೇಲೆ ಕೂರಿಸಲು ಒಪ್ಪಿತು. ಇಂಗ್ಲಿಷರ ಸಹಾಯಕ ಸೈನ್ಯ ಪದ್ಧತಿಗೆ ಬಾಜೀರಾಯ ಒಪ್ಪಿಕೊಂಡ. ಈ ಒಪ್ಪಂದದ ಮುಖ್ಯ ಅಂಶಗಳಿವು; ಉಭಯ ಪಕ್ಷಗಳೂ ತಮ್ಮ ಪರಸ್ಪರ ಮಿತ್ರರನ್ನೂ ಶತ್ರುಗಳನ್ನೂ ಪರಸ್ಪರ ಮಿತ್ರರೂ, ಶತ್ರುಗಳೂ ಎಂದು ಭಾವಿಸಬೇಕು; ಬಾಜಿರಾಯನ ರಾಜ್ಯವನ್ನು ಕಂಪನಿ ತನ್ನ ರಾಜ್ಯವೆಂದೇ ರಕ್ಷಿಸಬೇಕು. 6000 ಜನ ಕಾಲ್ಬಲಕ್ಕೆ ಕಡಿಮೆ ಇಲ್ಲದ ಕಂಪನಿಯ ಸೈನ್ಯ ಬಾಜೀರಾಯನ ರಾಜ್ಯದಲ್ಲಿ ಶಾಶ್ವತವಾಗಿರತಕ್ಕದ್ದು. ಈ ಸೈನ್ಯಕ್ಕೆ ತಗಲುವ 26 ಲಕ್ಷ ರೂಪಾಯಿಗಳನ್ನು ಕಂಪನಿಗೆ ಬಾಜೀರಾಯ ವಾರ್ಷಿಕವಾಗಿ ನೀಡಬೇಕು. ಇಂಗ್ಲಿಷರನ್ನು ಬಿಟ್ಟು ಅನ್ಯ ಐರೋಪ್ಯರನ್ನು ರಾಜ್ಯದ ಸೇವೆಯಿಂದ ಹೊರಹಾಕಬೇಕು. ಗಾಯಕವಾಡ ಮತ್ತು ನಿಜಾಮ್ ಇವರೊಂದಿಗೆ ಉಂಟಾಗುವ ಭಿನ್ನಭಿಪ್ರಾಯಗಳಲ್ಲಿ ಇಂಗ್ಲಿಷರ ಮಧ್ಯಸ್ಥಿಕೆ ಒಪ್ಪಿಕೊಳ್ಳಬೇಕು. ಕಂಪನಿಯ ಅನುಮತಿ ಇಲ್ಲದೇ ಯಾವ ವಿದೇಶಿಯರೊಂದಿಗೂ ಸಂಬಂಧವಿರಿಸಿಕೊಳ್ಳಕೂಡದು.

	ಈ ಒಪ್ಪಂದದಿಂದಾಗಿ ಪೇಷ್ವೆ ಮತ್ತು ಮರಾಠರ ಸ್ವಾತಂತ್ರ್ಯ ಹರಣವಾಯಿತು. ಮರಾಠರು ವಿಶೇಷತಃ ಸಿಂಧ್ಯ ಮತ್ತು ಹೋಳ್ಕರ್ ಈ ಒಪ್ಪಂದವನ್ನು ಪ್ರತಿಭಟಿಸಿದರು. ಸ್ವತಃ ಬಾಜೀರಾಯನೇ ಇದರಿಂದ ಕಳಚಿಕೊಳ್ಳಲು ಪ್ರಯತ್ನಿಸಿದಾಗ ಎರಡನೆಯ ಮರಾಠ ಯುದ್ಧಕ್ಕೆ (1803-05) ನಾಂದಿಯಾಯಿತು.						
	(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ